ಡಾರ್ವಿನ್ ಸಿದ್ಧಾಂತ-
ಜೀವಿವಿಕಾಸದ ಕ್ರಿಯಾತಂತ್ರವನ್ನು ವಿವರಿಸಲು ಚಾಲ್ರ್ಸ್ ರಾಬರ್ಟ್ ಡಾರ್ವಿನ್ ಕೊಟ್ಟಿರುವ ಸಿದ್ಧಾಂತ (ಡಾರ್ವಿನಿಸಮ್). ಇದರ ಪ್ರತಿಪಾದನೆಯಲ್ಲಿ ಜೀವಿವಿಕಾಸಕ್ಕೆ ಕಾರಣವಾಗಿರುವ ಪ್ರಕೃತಿಯ (ನೈಸರ್ಗಿಕ ಆಯ್ಕೆ: ನ್ಯಾಚುರಲ್ ಸೆಲೆಕ್ಷನ್) ಪ್ರಭಾವ ಮತ್ತು ಪಾತ್ರಗಳನ್ನೂ ಅದರ ಮೂಲಕ ಜೀವರಾಶಿಗಳು ತಮ್ಮ ತಮ್ಮ ಪರಿಸರಗಳಿಗೆ ತಕ್ಕಂತೆ ಪರಿ ಹೊಂದಾಣಿಕೆಯಾಗಿರುವುದನ್ನೂ ಉದಾಹರಣೆಗಳ ಮೂಲಕ ವೈe್ಞÁನಿಕವಾಗಿ ಹಾಗೂ ತಾರ್ಕಿಕವಾಗಿ ಚರ್ಚಿಸಿದ್ದಾನೆ. ಡಾರ್ವಿನ್ನಿನ ಸಿದ್ಧಾಂತ ಇಂದು ಹಾಗೆಯೇ ಉಳಿದುಬಂದಿಲ್ಲ. 20ನೆಯ ಶತಮಾನದಲ್ಲಿ ನಡೆದಿರುವ ಸಂಶೋಧನೆಗಳ ಫಲವಾಗಿ ಅನೇಕ ಬಗೆಯಲ್ಲಿ ಬದಲಾಗಿದೆ. ಜೀವಿವಿಕಾಸದಲ್ಲಿ ನಿಸರ್ಗದ ಪಾತ್ರ ಬಹುಮುಖ್ಯವಾಗಿದೆಯಾದರೂ ಪ್ರಕೃತಿ ಕೈವಾಡವೇ ಜೀವಿವಿಕಾಸವೆಂದಾಗಲಿ ಅಥವಾ ಅವು ತತ್ಸಮಶಬ್ದಗಳೆಂದಾಗಲಿ ಭಾವಿಸುವುದು ತಪ್ಪು.

	ಈ ಸಿದ್ಧಾಂತ ಜೀವಿಪ್ರಭೇದಗಳ ಉಗಮ (ದಿ ಆರಿಜನ್ ಆಫ್ ಸ್ಪೀಷೀಸ್) ಎಂಬ ಗ್ರಂಥದ ರೂಪದಲ್ಲಿ ಜನರ ಕೈಸೇರಿದುದು 1859ರಲ್ಲಿ. ಇದರಲ್ಲಿ ಒಳಗೊಂಡ ವಾದವನ್ನು ಆಲ್ಫ್ರೆಡ್ ರಸೆಲ್ ವ್ಯಾಲೇಸ್ (1823-1913) ಕೂಡ ಸ್ವತಂತ್ರವಾಗಿ ರೂಪಿಸಿ 1858ರಲ್ಲಿ ಡಾರ್ವಿನ್ ಅವರಿಗೆ ಒಂದು ಪತ್ರದ ಮೂಲಕ ತಿಳಿಸಿದ. ಇವರಿಬ್ಬರೂ ಇಂಗ್ಲೆಂಡ್ ಸಂಜಾತರು, ಪ್ರಕೃತಿವಿe್ಞÁನಿಗಳು. ಇಬ್ಬರೂ ತಮ್ಮ ತಮ್ಮ ಜೀವನದಲ್ಲಿ ಪ್ರತ್ಯೇಕವಾಗಿ ದಕ್ಷಿಣ ಅಮೆರಿಕದ ಇಂದಿನ ಜೀವಿಸಂಪತ್ತನ್ನೂ ಮತ್ತು ಗತಕಾಲದ ಜೀವಿಗಳ ಫಾಸಿಲುಗಳನ್ನೂ ಅಧ್ಯಯನ ಮಾಡಿದವರು. ಇಬ್ಬರೂ ತಾಮಸ್ ರಾಬರ್ಟ್ ಮ್ಯಾಲ್ತಸ್‍ನ ಪ್ರಜಾಸಂಖ್ಯೆಯ ಸಮಸ್ಯೆಗಳು ಎಂಬ ಗ್ರಂಥದಿಂದ (1798) ಪ್ರಭಾವಿತರಾದವರು. ಆದರೆ ಡಾರ್ವಿನ್ ಬೀಗಲ್ ಯಾನದಿಂದ ಹಿಂದಿರುಗಿದ ಮೇಲೆ ಇಂಗ್ಲೆಂಡಿನಲ್ಲಿಯೇ ಉಳಿದು ತಾನು ಸಂಗ್ರಹಿಸಿದ್ದ ಫಾಸಿಲುಗಳನ್ನು ಮತ್ತು ಜೀವಿರಾಶಿಯನ್ನು ಪರಿಶೀಲಿಸುತ್ತ 1839-1843ರ ಕಾಲದಲ್ಲಿಯೇ ಪ್ರಕೃತಿ ಕೈವಾಡದ ಬಗ್ಗೆ ಯೋಚಿಸಿ ಒಂದು ಕರಡು ಪ್ರಬಂಧದ ರೂಪದಲ್ಲಿ ವಿಕಾಸದ ಸ್ಥೂಲಚಿತ್ರವನ್ನು ರಚಿಸಿಕೊಂಡಿದ್ದ. ಆದರೆ ಅಂದಿನ ಸಮಾಜದಲ್ಲಿದ್ದ ಭಾವನೆಗಳನ್ನು ಬುಡಮೇಲು ಮಾಡುವ ಇಚ್ಫೆಯಿಲ್ಲದೆ ಬಹಳ ವರ್ಷ ಸುಮ್ಮನಿದ್ದು ಕೊನೆಗೆ ಆಪ್ತರ ಒತ್ತಾಯದಿಂದ 1856ರಲ್ಲಿ ತನ್ನ ಮಹಾಗ್ರಂಥದ ಲೇಖನವನ್ನು ಪ್ರಾರಂಭಿಸಿದ್ದ. ವ್ಯಾಲೇಸ್ ಆದರೋ ದಕ್ಷಿಣ ಅಮೆರಿಕದ ಬ್ರಜಿûಲಿನ ಜೀವಿಸಂಪತ್ತನ್ನು ಪರೀಕ್ಷಿಸಿ ಕೊನೆಗೆ ಮಲಯ ದ್ವೀಪಸ್ತೋಮದ ಟೆರ್‍ನಾಟ್ ದ್ವೀಪದಲ್ಲಿ ನೆಲೆಸಿ ಜೀವಿವಿಕಾಸದ ಬಗ್ಗೆ ಪ್ರತ್ಯೇಕವಾಗಿ ಸಂಶೋಧನೆ ನಡೆಸುತ್ತಿದ್ದ. ಈತ ಡಾರ್ವಿನ್ನನಿಗೆ ತನ್ನ ಪ್ರಬಂಧವನ್ನು ಕಳುಹಿಸಿಕೊಡುವ ಹೊತ್ತಿಗೆ ಡಾರ್ವಿನ್ ತನ್ನ ಉದ್ಗ್ರಂಥದ ಕಾಲುಭಾಗದಷ್ಟನ್ನು ಮುಗಿಸಿದ್ದ. ಮತ್ತು ಅಮೆರಿಕದ ಸಸ್ಯವಿe್ಞÁನಿ ಆಸ ಗ್ರೇ ಎಂಬಾತನಿಗೆ ತನ್ನ ಸಿದ್ಧಾಂತನ ಸಾರಾಂಶವನ್ನು 1857ರಲ್ಲಿ ಪತ್ರದ ಮೂಲಕ ವ್ಯಕ್ತಪಡಿಸಿದ. ಡಾರ್ವಿನ್ ವ್ಯಾಲೇಸನ ಪ್ರಬಂಧವನ್ನು ಓದಿ ತಮ್ಮಿಬ್ಬರ ವಾದ ಸರಣಿಯಲ್ಲಿದ್ದ ಸಾಮ್ಯವನ್ನು ಕಂಡು ಚಕಿತಗೊಂಡ. ಕೊನೆಗೆ ವಿe್ಞÁನಕ್ಷೇತ್ರದಲ್ಲಿ ತನ್ನ ಆಪ್ತರಾಗಿದ್ದ ಭೂವಿe್ಞÁನಿ ಸರ್ ಚಾಲ್ರ್ಸ್ ಲೈಯಲ್ ಮತ್ತು ಸಸ್ಯವಿe್ಞÁನಿ ಜೋಸೆಫ್ ಡಾಲ್ಟನ್ ಹುಕರ್ ಅವರಿಗೆ ವ್ಯಾಲೇಸನ ಪ್ರಬಂಧವನ್ನು ತೋರಿಸಿ ಈ ಸಾಮ್ಯವನ್ನು ವಿವರಿಸಿದ. ಅವರು ಡಾರ್ವಿನ್ನನ ಗ್ರಂಥದ ಸಾರಾಂಶವನ್ನೂ ವ್ಯಾಲೇಸನ ಪ್ರಬಂಧವನ್ನೂ ಲಂಡನಿನ ಲಿನಿಯನ್ ಸಂಘದ ಆಶ್ರಯದಲ್ಲಿ ಓದಲು ಏರ್ಪಾಡುಮಾಡಿ ಪ್ರೋತ್ಸಾಹಿಸಿದರು. ಡಾರ್ವಿನ್ನನೇ 1858ರ ಜುಲೈ ಒಂದನೆಯ ತಾರೀಕು ಎರಡು ಲೇಖನಗಳನ್ನೂ ಮಂಡಿಸಿದ. ಅಲ್ಲದೆ ಅವು ಆ ಸಂಘದ ಆಶ್ರಯದಲ್ಲಿ ಹೊರಡುತ್ತಿದ್ದ ಪತ್ರಿಕೆಯಲ್ಲಿ ಪ್ರಕಟವಾದುವು. ಜೀವಿಪ್ರಭೇದಗಳ ಉಗಮಕ್ಕೆ ಪ್ರಕೃತಿ ಆಯ್ಕೆಯೇ ಕಾರಣವೆಂಬ ಸಿದ್ಧಾಂತವನ್ನು ಪ್ರತಿಪಾದಿಸಿದವರಲ್ಲಿ ಡಾರ್ವಿನ್ನನೇ ಪ್ರಪ್ರಥಮನೆಂದು 16-18ವರ್ಷಗಳ ಹಿಂದೆಯೇ ಆ ಸಿದ್ಧಾಂತದ ಕರಡು ಪ್ರತಿಯನ್ನು ಓದಿದ್ದ ಲೈಯಲ್ ಮತ್ತು ಹುಕರ್ ಅವರು ತೀರ್ಮಾನಿಸಿದ್ದರು. ಪ್ರಕೃತಿಯ ಕೈವಾಡದ ಮೂಲಕ ಜೀವಿಗಳ ವಿಕಾಸ ನಡೆಯುತ್ತದೆ ಎಂಬ ಸಿದ್ಧಾಂತವನ್ನು ತಾನು ಸಂಗ್ರಹಿಸಿದ್ದ ವೈe್ಞÁನಿಕ ಪುರಾವೆಗಳ ಆಧಾರದ ಮೇಲೆ ರೂಪಿಸಿಕೊಂಡು 1859ರಲ್ಲಿ ಡಾರ್ವಿನ್ ಮಂಡಿಸಿದ. ಈ ಕಾರಣದಿಂದಲೇ ಪ್ರಕೃತಿಯ ಆಯ್ಕೆಯ ಸಿದ್ಧಾಂತ ಡಾರ್ವಿನ್ ಸಿದ್ಧಾಂತವೆಂದು ಹೆಸರಾಗಿದೆ.

	ಡಾರ್ವಿನ್ನನ ಈ ಗ್ರಂಥ ಹತ್ತೊಂಬತ್ತನೆಯ ಶತಮಾನದ ಮಹಾಗ್ರಂಥ ಕ್ರಾಂತಿಕಾರಿಗ್ರಂಥ. ಅದು ಅಂದಿನ ವೈe್ಞÁನಿಕ, ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕ ಕ್ಷೇತ್ರಗಳಲ್ಲಿ ಕ್ರಾಂತಿ ಎಬ್ಬಿಸಿತು. ಇದರಿಂದಾಗಿ ಜೀವಿವಿಕಾಸ ವಾದವನ್ನು ಪ್ರಪ್ರಥಮವಾಗಿ ಪ್ರಚುರಪಡಿಸಿದ ಮೂಲಪುರುಷ ಡಾರ್ವಿನ್ ಎಂದು ಜನ ಭಾವಿಸಲಾರಂಭಿಸಿದರು. ವಾಸ್ತವವಾಗಿ ಜೀವಿವಿಕಾಸದ ಬಗ್ಗೆ ಚಿಂತನಮಾಡಿದವರಲ್ಲಿ ಚಾಲ್ರ್ಸ್‍ಡಾರ್ವಿನ್ ಮೊತ್ತಮೊದಲಿಗನೇನೂ ಅಲ್ಲ. ಕ್ರಿಸ್ತನ ಕಾಲಕ್ಕೂ ಹಿಂದೆಯೇ ದಾರ್ಶನಿಕರೂ, ತತ್ತ್ವe್ಞÁನಿಗಳೂ ಈ ಸಮಸ್ಯೆಯನ್ನು ಕುರಿತು ಚಿಂತಿಸಿ ಸೃಷ್ಟಿವಿಕಾಸಾತ್ಮಕವಾದುದೆಂದು ಪ್ರತಿಪಾದಿಸುತ್ತ ಬಂದಿದ್ದರು. ಅವರಲ್ಲಿ ಗ್ರೀಸಿನ ಎಂಪೆಡಾಕ್ಲಿಸ್ (ಕ್ರಿ.ಪೂ.490-430) ಮತ್ತು ರೋಮಿನ ಲೂಕ್ರೀಷಿಯನ್ (ಕ್ರಿ.ಪೂ.98-55) ಎಂಬವರು ಮುಖ್ಯರು. ಇಟಲಿಯ ಲಿಯೊನಾರ್ಡೊ ಡ ವಿಂಚೀ (1452-1519) ಬೈಬಲಿನಲ್ಲಿ ನಿರೂಪಣೆಯಾಗಿರುವ ವಿಶೇಷ ಸೃಷ್ಟಿವಾದವನ್ನು ತಿರಸ್ಕರಿಸಿದವರಲ್ಲಿ ಮೊತ್ತಮೊದಲಿಗ. ಫ್ರಾನ್ಸಿನ ಡ ಬೂಫೋನ್ (1707-1788) ಎಂಬಾತ ಪರಿಸರವು ಪ್ರತಿಯೊಂದು ಜೀವಿಯಲ್ಲೂ ಸಣ್ಣ ಸಣ್ಣ ವಿವಿಧತೆಗಳನ್ನು ಉಂಟುಮಾಡುತ್ತದೆಂದೂ ಅಂಥ ವಿವಿಧತೆಗಳು ಸಂಗ್ರಹವಾಗಿ ದೊಡ್ಡ ದೊಡ್ಡ ವಿಭಿನ್ನತೆಗಳಿಗೆ ಕಾರಣವಾಗುವುದೆಂದೂ ಸರಳವಾದ ಪೂರ್ವಜ ಜೀವಿಗಳು ವಿಕಾಸಗೊಂಡು ಮೇಲ್ಮಟ್ಟದ ಪರಿವರ್ತಿತ ಜೀವಿಗಳಾಗಿ ರೂಪುಗೊಳ್ಳುತ್ತವೆಂದೂ ವಾದಿಸಿದ್ದ. ಚಾಲ್ರ್ಸ್ ಡಾರ್ವಿನ್ನನ ತಾತ ಎರ್ಯಾಸ್ಮಸ್ ಡಾರ್ವಿನ್ (1731-1802) ಕೂಡ ಇಂದಿನ ಜೀವಿಗಳು ಹಿಂದಿನವುಗಳಿಂದ ವಿಕಾಸಗೊಂಡು ಆದುವೆಂದೂ ಪರಿಸರದಲ್ಲಿ ನಿರಂತರ ಬದಲಾವಣೆ ಆಗುತ್ತಿರುವುದೆಂದೂ ಬದಲಾವಣೆಗೆ ತಕ್ಕಂತೆ ಜೀವಿಗಳೂ ಬದಲಾಗುತ್ತಿರುವುದೆಂದೂ ವಾದಿಸಿದ್ದ. ಪರಿಸರದ ಉದ್ದೀಪನಗಳಿಗೆ ಪ್ರತಿಕ್ರಿಯಾ ರೂಪದಲ್ಲಿ ಕಾಣಿಸಿಕೊಳ್ಳುವ ಗುಣಗಳು ಆನುವಂಶಿಕವಾಗಿ ಮುಂದುವರಿಯುವುದೆಂದೂ ಈತ ತರ್ಕಿಸಿದ್ದ. ಜೀವಿ ವಿಕಾಸದ ಸಾಮಾನ್ಯ ವಾದವನ್ನು ಮುಂದಿಟ್ಟವರಲ್ಲಿ ಫ್ರಾನ್ಸಿನ ಜೀನ್ ಬಾಪ್ಟಿಸ್ಟ್ ಲಮಾರ್ಕ್ 1744-1829 ಅಗ್ರಗಣ್ಯ 1809ರಲ್ಲಿ ಪ್ರತಿಪಾದಿಸಿದ. ತನ್ನ ವಾದದಲ್ಲಿ ಪ್ರತಿಯೊಂದು ಜೀವಿಯಲ್ಲೂ ಒಂದೊಂದು ಸಂಕಲ್ಪ ಶಕ್ತಿಯಿದೆ, ಉತ್ಕಟೇಚ್ಛೆಯಿದೆ. ಇದರ ಸಹಾಯದಿಂದ ಜೀವಿಗಳು ಪರಿಸರದ ಪ್ರಭಾವಕ್ಕೆ ಒಳಗಾಗಿ ತಮ್ಮ ಅವಯವಗಳನ್ನು ಹೆಚ್ಚುಹೆಚ್ಚಾಗಿ ಉಪಯೋಗಿಸಿಕೊಳ್ಳುತ್ತವೆ. ತತ್ಫಲವಾಗಿ ಆ ಅವಯವಗಳು ದಷ್ಟಪುಷ್ಟವಾಗಿ ವೃದ್ಧಿಯಾಗುವುವು. ದೀರ್ಘಕಾಲ ಉಪಯೋಗಿಸದೆ ಹೋದರೆ ಅವಯವಗಳು ಕ್ಷೀಣವಾಗುತ್ತವೆ. ಹೀಗೆ ಜೀವಿತ ಕಾಲದಲ್ಲಿ ಪ್ರಯತ್ನಪೂರ್ವಕವಾಗಿ ಅರ್ಜಿಸಿದ ಗುಣಲಕ್ಷಣಗಳು ವಂಶಾನುಕ್ರಮವಾಗಿ ಪೀಳಿಗೆಯಿಂದ ಪೀಳಿಗೆಗೆ ಸಾಗುವುವು ಎಂದೂ ಸಂಕಲ್ಪ ಪ್ರಯತ್ನಗಳ ಫಲವೇ ಜೀವಿವಿಕಾಸವೆಂದೂ ಎಲ್ಲಕ್ಕೂ ಪರಿಸರವೇ ಪ್ರಧಾನವೆಂದೂ ಲಮಾರ್ಕ್ ಪ್ರತಿಪಾದಿಸಿದ್ದ.

	ಡಾರ್ವಿನ್ ಜೀವಿವಿಕಾಸವಾದದ ಮೂಲಪುರುಷನಲ್ಲದಿದ್ದರೂ ತನ್ನ ಹಿಂದಿನ ವಿಕಾಸವಾದಿಗಳು ಮಾಡದಿದ್ದ ಕೆಲಸವನ್ನು ಈತ ಮಾಡಿದ. ತನ್ನ ವಾದಕ್ಕೆ ಪುಷ್ಟಿ ಕೊಡುವ ಸಾಕ್ಷ್ಯಾಧಾರಗಳನ್ನು ಮೂಲಪರಿಸರದಲ್ಲಿ ಅಧ್ಯಯನ ಮಾಡಿದ್ದೇ ಅಲ್ಲದೆ ಅವನ್ನೂ ಅವಕ್ಕೆ ಸಂಬಂಧಿಸಿದ ಇತರ ಮಾಹಿತಿಗಳನ್ನೂ ಸಂಗ್ರಹಿಸಿ ಒಪ್ಪವಾಗಿ ಅಳವಡಿಸಿ ಅವುಗಳ ಆಧಾರದಿಂದ ಜೀವಿವಿಕಾಸದ ಕ್ರಿಯಾತಂತ್ರವನ್ನು ವಿವರಿಸಿದ. 

	ಡಾರ್ವಿನ್ನನ ವಿಕಾಸವಾದಕ್ಕೆ ಭೂವಿe್ಞÁನದ ಅಧ್ಯಯನ ಹೆಚ್ಚು ಸಹಾಯಕಾರಿ ಆಗಿತ್ತೆನ್ನಬಹುದು. ಇಂಗ್ಲೆಂಡಿನ ಭೂವಿe್ಞÁನಿ ಜೇಮ್ಸ್ ಹಟನ್ (1726-97) ತನ್ನ ಪುಸ್ತಕದಲ್ಲಿ (1785) ಭೂಮಿಯ ಪ್ರಾಚೀನತೆ ಮತ್ತು ಗ್ರಹಗಳಲ್ಲಾಗುವ ಬದಲಾವಣೆಗಳನ್ನು ವಿವರಿಸಿದ್ದ. ಲೈಯಲ್ ತನ್ನ ಗ್ರಂಥದಲ್ಲಿ (1830) ಭೂಮಿಯ ಲಕ್ಷಣಗಳು ನಿರಂತರವಾಗಿ ಬದಲಾಗುವುತ್ತಿರುವುವೆಂದೂ ಇಂದಿನ ಭೂಲಕ್ಷಣಗಳು ಹಿಂದಿನ ಭೂಲಕ್ಷಣಗಳನ್ನು ತೋರಿಸುತ್ತವೆಂದೂ ಹೇಳಿದ್ದ. ಇದರ ಜೊತೆಗೆ ಗತಕಾಲದ ಜೀವಿರಾಶಿಗಳು ತಮ್ಮ ಬದುಕಿನ ಕುರುಹಾಗಿ ಭೂಮಿಯಲ್ಲಿ ಹುದುಗಿಸಿಟ್ಟಿರುವ ಫಾಸಿಲುಗಳ ಅಧ್ಯಯನ ಜೀವಿವಿಕಾಸಕ್ಕೆ ಪ್ರತ್ಯಕ್ಷ ಪ್ರಮಾಣವನ್ನು ಒದಗಿಸುತ್ತವೆ ಎಂಬುದು ಸರ್ವವೇದ್ಯವಾಗುವಂತಿತ್ತು. ಹದಿನೇಳನೆಯ ಶತಮಾನದ ಹೊತ್ತಿಗೆ ಕ್ಸಿನೋಫೇನಸ್, ಡ ವಿಂಚೀ ಮತ್ತು ಸ್ಟೀನೊ ಎಂಬುವರು ಜೀವಿಗಳ ಫಾಸಿಲುಗಳು ಗತಕಾಲದ ಜೀವರಾಶಿಗಳ ಕುರುಹುಗಳನ್ನು ಸಾರುತ್ತವೆಂದು ಸೂಚಿಸಿದ್ದರು. ಫ್ರೆಂಚ್‍ವಿe್ಞÁನಿಗಳಾದ ಜಾರ್ಜಸ್ ಕ್ಯೂವೀಯೇ (1769-1832), ಲೂಯಿ ಅಗಾಸಿಸ್ (1807-73), ಇಂಗ್ಲೆಂಡಿನ ರಿಚರ್ಡ್ ಓವನ್ (1804-93) ಮತ್ತು ವಿಲಿಯಮ್ ಸ್ಮಿತ್ (1769-1839) ಇವರು ಇಂದಿನ ಮತ್ತು ಹಿಂದಿನ ಜೀವಿರಾಶಿಗಳಲ್ಲಿ ಎಡೆಬಿಡದ ಸಂಬಂಧವಿದೆ ಎಂಬುದನ್ನು ಫಾಸಿಲುಗಳು ಸೂಚಿಸುತ್ತವೆಂಬುದನ್ನು ತೋರಿಸಿದ್ದರು. ಆದರೂ ಜೀವಿಜಾತಿಗಳು ಪ್ರತ್ಯೇಕವಾಗಿಯೇ ಸೃಷ್ಟಿಯಾಗಿವೆ ಎಂಬ ವಾದದಲ್ಲಿ ಅಗಾಸಿಸ್, ಓವನ್ ಮತ್ತು ಕ್ಯೂವಿಯೇ ದೃಢನಂಬಿಕೆಯಿಟ್ಟಿದ್ದರು.

	ಜೀವಿವಿಕಾಸದ ಬಗ್ಗೆ ಡಾರ್ವಿನ್ನನ ವಿಚಾರಶಕ್ತಿಗೆ ಪ್ರಚೋದನೆ ಉಂಟು ಮಾಡಿದುದು ಮ್ಯಾಲ್ತಸನ ಗ್ರಂಥ. ಪ್ರಜಾಸಂಖ್ಯೆಯ ಸಮಸ್ಯೆಗಳು ಎಂಬ ಈ ಪುಸ್ತಕದಲ್ಲಿ ಮಾನವನ ಅತಿಸಂತಾನ, ತತ್ಫಲವಾಗಿ ಆಹಾರ ಮತ್ತು ಸ್ಥಳಾವಕಾಶಗಳಿಗಾಗಿ ಮಾನವರಲ್ಲಿ ನಡೆಯುವ ಸ್ಪರ್ಧೆ ಮತ್ತು ಬದುಕಿಗಾಗಿ ಹೋರಾಟಗಳು (ಸ್ಟ್ರಗಲ್ ಫಾರ್ ಎಗ್ಸಿಸ್ಟೆನ್ಸ್) ದತ್ತಾಂಶಗಳೊಡನೆ ಚಿತ್ರಿಸಲ್ಪಟ್ಟಿದ್ದವು. ಪುಸ್ತಕದಲ್ಲಿದ್ದ ಚಿತ್ರ ಕೇವಲ ಮಾನವನಿಗೆ ಮಾತ್ರವಲ್ಲದೆ ಪ್ರತಿಯೊಂದು ಜೀವಿಗೂ ಅನ್ವಯಿಸುತ್ತದೆಯೆಂದು ಡಾರ್ವಿನ್ ತನ್ನ ಬೀಗಲ್ ಯಾನದ ಅನುಭವದಿಂದ ಕಂಡುಕೊಂಡ. ಪಾಲಿತಪ್ರಾಣಿ ಮತ್ತು ಸಾಗುವಳಿ ಸಸ್ಯಗಳ ಬಗ್ಗೆ ಸಂಗ್ರಹಿಸಿದ ದತ್ತಾಂಶಗಳೂ ಅದಕ್ಕೆ ಪೂರಕವಾಗಿದ್ದುವು. ಉತ್ತಮ ತಳಿಗಳಿಗೆ ಆಯ್ಕೆಯೇ (ಸೆಲೆಕ್ಷನ್) ಪ್ರಧಾನ ಎಂಬುದು ಡಾರ್ವಿನ್ನನಿಗೆ ವೇದ್ಯವಾಗಿತ್ತು. ಉತ್ತಮ ಸಾಕುಪ್ರಾಣಿ ಹಾಗೂ ಉತ್ತಮ ಸಾಗುವಳಿ ಸಸ್ಯಗಳಿಗೆ ಮಾನವನ ಕೈವಾಡ (ಆರ್ಟಿಫಿಷಿಯಲ್ ಸೆಲೆಕ್ಷನ್) ಕಾರಣವಾದರೆ ಪ್ರಕೃತಿಯಲ್ಲಿ ಬದಲಾಗುತ್ತಿರುವ ಪರಿಸರಕ್ಕೆ ಹೊಂದಿಕೊಳ್ಳುವ ಜಯಪ್ರದ ಜೀವಿರಾಶಿಗಳಿಗೆ ಪ್ರಕೃತಿ ಕೈವಾಡ ಅಥವಾ ನೈಸರ್ಗಿಕ ಆಯ್ಕೆಯೇ (ನ್ಯಾಚುರಲ್ ಸೆಲೆಕ್ಷನ್) ಕಾರಣವಾಗಿರಬೇಕು ಎಂಬ ನಿರ್ಧಾರಕ್ಕೆ ಬರುವುದು ಡಾರ್ವಿನ್ನನಿಗೆ ಕಷ್ಟವಾಗಲಿಲ್ಲ. ಅಲ್ಲದೆ ತನ್ನ ಸಮಕಾಲೀನನಾದ ಹರ್ಬರ್ಟ್ ಸ್ಪೆನ್ಸರನಿಂದ (1820-1903) ಈ ಸಿದ್ಧಾಂತದ ನಿರೂಪಣೆಗೆ ಅಗತ್ಯವಾದ ಹಾಗೂ ಅರ್ಥಗರ್ಭಿತವಾದ ಯೋಗ್ಯತಮ ಜೀವಿಗಳ ಉಳಿಯುವಿಕೆ (ಸರ್ವೈವಲ್ ಆಫ್ ದಿ ಫಿಟೆಸ್ಟ್) ಎಂಬ ಪದಸಮುಚ್ಚಯವನ್ನು ಪಡೆದುಕೊಂಡ.

	ತನ್ನ ಭೂವಿe್ಞÁನದ ಅಧ್ಯಯನ ಮತ್ತು ಬೀಗಲ್ ಯಾನದಿಂದ ಪಡೆದ ಅನುಭವ ಹಾಗೂ ಪಾಲಿತಪ್ರಾಣಿ ಮತ್ತು ಸಾಗುವಳಿ ಸಸ್ಯಗಳ ಬಗ್ಗೆ ಸಂಗ್ರಹಿಸಿದ ವಿವರಗಳ ಆಧಾರದ ಮೇಲೆ ಪ್ರಕೃತಿಯ ಆಯ್ಕೆಯೇ ಪ್ರಧಾನವಾದ ಜೀವಿವಿಕಾಸ ಸಿದ್ಧಾಂತವನ್ನು 1. ಅತಿಸಂತಾನ, 2. ಜೀವಿಸಂದಣಿಯ (ಪಾಪ್ಯುಲೇಷನ್-ಯಾವುದಾದರೊಂದು ನಿರ್ದಿಷ್ಟ ಪರಿಸರಕ್ಷೇತ್ರಕ್ಕೆ ಹೊಂದಿಕೊಂಡು ಜೀವಿಸುವ ಒಂದೇ ಜೀವಿಪ್ರಭೇದಕ್ಕೆ ಸಂಬಂಧಿಸಿದ ಜೀವಿಗಳ ಗುಂಪು) ಗಾತ್ರದಲ್ಲಿ ಸ್ಥಿರತೆ, 3. ಬದುಕಿಗಾಗಿ ಹೋರಾಟ ಅಥವಾ ಜೀವನ ಸಂಘರ್ಷ, 4. ವಿಭಿನ್ನತೆ (ವೇರಿಯೇಷನ್) ಮತ್ತು 5. ಯೋಗ್ಯತಮ ಜೀವಿಗಳ ಉಳಿಯುವಿಕೆ ಎಂಬ ಐದು ಮೂಲತತ್ತ್ವಗಳ ಸಹಾಯದಿಂದ ಪ್ರತಿಪಾದಿಸಿದ್ದಾನೆ. ಇವುಗಳಲ್ಲಿ ಮೂರು ತತ್ತ್ವಗಳು ಪ್ರಕೃತಿಯಲ್ಲಿ ಕಂಡುಬರುವ ವಿಶೇಷ ಸಂಗತಿಗಳು, ಉಳಿದೆರಡು ಅವುಗಳಿಂದ ಮೂಡಿಬಂದ ನಿರ್ಣಯಗಳು.

	1. ಅತಿಸಂತಾನ: ತಾನು ಅಳಿಯದೇ ಉಳಿದು ತನ್ನ ಪೀಳಿಗೆಯನ್ನು ಮುಂದುವರಿಸಿಕೊಂಡು ಹೋಗಬೇಕೆಂಬುದು ಪ್ರತಿಯೊಂದು ಜೀವಿಯ ವಿಶೇಷ ಗುಣ. ಪರಿಸರದ ಒತ್ತಡಗಳು (ಎನ್ವೈರನ್ಮೆಂಟಲ್ ಪ್ರೆಷರ್) ಇಲ್ಲದಿದ್ದರೆ ಪ್ರತಿಯೊಂದು ಜೀವಿಯ ಸಂತಾನ ಜ್ಯಾಮಿತೀಯ ಶ್ರೇಣಿಯಲ್ಲಿ ವೃದ್ಧಿಯಾಗುತ್ತಿರುತ್ತದೆ. ವರ್ಷಕ್ಕೊಮ್ಮೆ ಸಂತಾನೋತ್ಪತ್ತಿ ಮಾಡುವ ಒಂದು ಜೀವಿಸಮುದಾಯದ ಸಂಖ್ಯೆ ಮೊದಲನೆಯವರ್ಷದ ಕೊನೆಯಲ್ಲಿ ಎರಡರಷ್ಟು, ಎರಡನೆಯ ವರ್ಷದಲ್ಲಿ ನಾಲ್ಕರಷ್ಟು, ಮೂರನೆಯ ವರ್ಷದಲ್ಲಿ ಎಂಟರಷ್ಟು ಇತ್ಯಾದಿಯಾಗಿ ವೃದ್ಧಿಯಾಗುವುದು. ಉತ್ತರ ಅಟ್ಲಾಂಟಿಕ್ ಸಾಗರದ ಕಾಡ್ ಮೀನು ಒಮ್ಮೆಗೆ ಎಂಟೂವರೆಕೋಟಿ ಮೊಟ್ಟೆಗಳನ್ನಿಡುತ್ತದೆ. ಒಂದು ಹೆಣ್ಣು ಕಪ್ಪೆ ಮುಂಗಾರು ಮಳೆಗಾಲದಲ್ಲಿ ಹದಿನೈದು ಸಾವಿರ ಮೊಟ್ಟೆಗಳನ್ನಿಡುತ್ತದೆ. ನೂರು ವರ್ಷ ಆಯುಸ್ಸು ಉಳ್ಳ ಒಂದು ಹೆಣ್ಣು ಆನೆ ತನ್ನ ಮೂವತ್ತನೆಯ ವರ್ಷಕ್ಕೆ ಸಂತಾನೋತ್ಪತ್ತಿ ಮಾಡಲು ಪ್ರಾರಂಭಿಸಿ ತನ್ನ ಜೀವಮಾನದಲ್ಲಿ ಆರುಮರಿಗಳನ್ನು ಹಾಕಿದರೆ 750ವರ್ಷಗಳ ಅವಧಿಯಲ್ಲಿ ಆನೆಗಳ ಸಂಖ್ಯೆ ಒಂದು ಕೋಟಿ ತೊಂಬತ್ತು ಲಕ್ಷ ಆಗುತ್ತದೆ ಎಂದು ಡಾರ್ವಿನ್ ಲೆಕ್ಕಹಾಕಿದ್ದಾನೆ. ಆಲದಮರದ ಹಣ್ಣಿನಲ್ಲಿ ಲಕ್ಷಾಂತರ ಬೀಜಗಳುಂಟು. ಅಂಥ ಹಣ್ಣುಗಳು ಒಂದು ಮರದಲ್ಲಿ ಒಂದು ವರ್ಷಕ್ಕೆ ಕೋಟ್ಯಂತರ ಉತ್ಪತ್ತಿಯಾಗುತ್ತವೆ. ಇವೆಲ್ಲ ಬೀಜಗಳೂ ಮೊಳೆತು ಆಲದ ಮರಗಳಾಗಿ ಬೆಳೆದರೆ ಮರಗಳ ಸಂಖ್ಯೆ ಎಷ್ಟಾಗಬಹುದು?

	2. ಜೀವಿಸಂದಣಿಗಳ ಗಾತ್ರದಲ್ಲಿ ಸ್ಥಿರತೆ: ಪ್ರತಿಯೊಂದು ಜೀವಿಪ್ರಭೇದದಲ್ಲೂ ಸಂತಾನೋತ್ಪತ್ತಿಯ ದರವು ಮೇಲೆ ನಿರೂಪಿಸಿದಂತೆ ಹೆಚ್ಚಾದರೂ ಪರಿಸರದಲ್ಲಿ ಜೀವಿಸಂದಣಿಗಳನ್ನು ನೋಡಿದಾಗ ಅವುಗಳ ಗಾತ್ರ ಆಗಾಗ್ಗೆ ಸಲ್ಪಮಟ್ಟಿಗೆ ಏರುಪೇರಾದರೂ ಬಹುಕಾಲದವರೆಗೆ ಸ್ಥಿರವಾಗಿರುವುದು ಗೊತ್ತಾಗುತ್ತದೆ. ಹಲವು ಬಗೆಯ ಅಡೆತಡೆಗಳಿರುವುದೆ ಈ ಸ್ಥಿರತೆಗೆ ಕಾರಣ. ಅಂದರೆ ಸಸ್ಯ ಹಾಗೂ ಪ್ರಾಣಿಗಳಲ್ಲಿ ಒಂದು ವಿಶಿಷ್ಟವಾದ ಸಮತೋಲನವಿದೆ. ಉದಾಹರಣೆಗೆ ಒಂದು ಮಾಂಸಾಹಾರಿ ಪ್ರಾಣಿಸಂದಣಿಯ ಗಾತ್ರ ಸಸ್ಯಹಾರಿ ಪ್ರಾಣಿಗಳ ಸಂದಣಿಯನ್ನು ಅವಲಂಬಿಸುತ್ತದೆ. ಮಾಂಸಾಹಾರಿ ಪ್ರಾಣಿಗಳು ಸಸ್ಯಾಹಾರಿ ಪ್ರಾಣಿಗಳನ್ನು ತಿನ್ನುತ್ತ ಹೋದರೆ ಕೊನೆಯಲ್ಲಿ ಮಾಂಸಾಹಾರಿ ಪ್ರಾಣಿಗಳ ಸಂದಣಿ ಹೆಚ್ಚಾಗಿ ಸಸ್ಯಾಹಾರಿಗಳ ಗಾತ್ರ ಕ್ಷೀಣಿಸುತ್ತದೆ. ಇದರ ಫಲವಾಗಿ ಮಾಂಸಾಹಾರಿಗಳಿಗೆ ಆಹಾರ ಪೂರೈಕೆಯಲ್ಲಿ ಕೊರತೆಯುಂಟಾಗುತ್ತದೆ. ಹಸಿವಿನಿಂದ ಮಾಂಸಾಹಾರಿಗಳ ಸಂಖ್ಯೆ ಕ್ಷಯಿಸುತ್ತದೆ. ಇವುಗಳ ಸಂಖ್ಯೆ ಕ್ಷಯಿಸಿದಂತೆಲ್ಲ ಸಸ್ಯಾಹಾರಿಗಳ ಸಂಖ್ಯೆ ಮತ್ತೆ ಹೆಚ್ಚುತ್ತ ಹೋಗುತ್ತದೆ. ಸಸ್ಯಾಹಾರಿಗಳ ಸಂಖ್ಯೆ ಹೆಚ್ಚಿದಂತೆ ಮಾಂಸಾಹಾರಿಗಳ ಸಂಖ್ಯೆ ಏರಲಾರಂಭಿಸುತ್ತದೆ. ಈ ಬಗೆಯ ಏರಿಳಿತಗಳ ಚಕ್ರ ಪ್ರಕೃತಿಯಲ್ಲಿ ಪ್ರಾಣಿಗಳಲ್ಲಿಯೇ ಇಲ್ಲದೆ ಸಸ್ಯಗಳಲ್ಲೂ ಸದಾ ಕಂಡುಬರುತ್ತದೆ.

	3. ಬದುಕಿಗಾಗಿ ಹೋರಾಟ: ಪ್ರಕೃತಿದತ್ತವಾದ ಮೇಲಿನ ಎರಡು ವೈಶಿಷ್ಟ್ಯಗಳ ಆಧಾರದ ಮೇಲೆ ಡಾರ್ವಿನ್ ಜೀವಿಸಂದಣಿಯ ಗಾತ್ರದಲ್ಲಿ ಕಂಡುಬರುವ ಸ್ಥಿರತೆಗೆ ವಿವಿಧರೀತಿಯ ಅಡೆತಡೆಗಳೇ ಕಾರಣವೆಂದು ಹೇಳಿದರೂ ಪರಿಸರದಲ್ಲಿ ಆಹಾರ, ರಕ್ಷಣೆ, ಸ್ಥಳಾವಕಾಶ ಹಾಗೂ ಸಂತಾನೋತ್ಪತ್ತಿಯ ಕ್ಷೇತ್ರಗಳಿಗೆ ಮಿತಿಯಿರುವುದರಿಂದ ಪ್ರತಿಯೊಂದು ಪ್ರಭೇದದಲ್ಲೂ ಆವಶ್ಯಕ ವಸ್ತುಗಳಿಗಾಗಿ ಜೀವಿಗಳು ನಿರಂತರವೂ ಸ್ಪರ್ಧಿಸಬೇಕಾಗುತ್ತದೆ. ಇದನ್ನೇ ಬದುಕಿಗಾಗಿ ಹೋರಾಟ ಎಂದು ಡಾರ್ವಿನ್ ಕರೆದ. ಇದು ಡಾರ್ವಿನ್ನನ ಮೊದಲನೆಯ ನಿರ್ಣಯ. ಆತನ ದೃಷ್ಟಿಯಲ್ಲಿ ಅಂತಃಪ್ರಭೇದದ ಹೋರಾಟವು (ಇಂಟ್ರಸ್ಪೆಸಿಫಿಕ್ ಸ್ಟ್ರಗಲ್) ಅಂತರ ಪ್ರಭೇದದ ಹೋರಾಟಕ್ಕಿಂತ (ಇಂಟರ್‍ಸ್ಪೆಸಿಫಿಕ್ ಸ್ಟ್ರಗಲ್) ತೀವ್ರತರವಾದುದು. ಈ ಹೋರಾಟ ಜೀವಿಯ ಜೀವನಚಕ್ರದ ಒಂದು ಕಾಲಕ್ಕೆ ಸೀಮಿತವಾದುದ್ದಲ್ಲ. ಮೊಟ್ಟೆಯಿಂದ ಹಿಡಿದು ಸಾಯುವ ವರೆಗೂ ನಡೆಯುತ್ತಿರುವ ಪ್ರಕೃತಿ ವಿಶಿಷ್ಟವಾದ ಘಟನೆ. ತಾಯಿಯ ಅಂಡಾಣುಗಳೆಲ್ಲವೂ ಗಂಡಿನ ಶುಕ್ರಾಣುಗಳಿಂದ ನಿಷೇಚನಗೊಳ್ಳದಿರಬಹುದು. ಯುಗ್ಮಜಗಳಾಗಿ ರೂಪುಗೊಳ್ಳದಿರಬಹುದು. ಯುಗ್ಮಜಗಳಾಗಿ ರೂಪುಗೊಂಡರೂ ಬೆಳೆದು ಪ್ರಾಯಸ್ಥಜೀವಿಗಳಾಗದಿರಬಹುದು. ಪ್ರೌಢಾವಸ್ಥೆಗೆ ಬಂದ ಜೀವಿಗಳೆಲ್ಲವೂ ಬದುಕಿ ಸಂತಾನೋತ್ಪತ್ತಿ ಮಾಡದಿರಬಹುದು. ಅಂದರೆ ಪ್ರತಿಯೊಂದು ಜೀವಿಯೂ ತನ್ನ ಜೀವಮಾನ ಕಾಲದಲ್ಲಿ ಹೆಜ್ಜೆ ಹೆಜ್ಜೆಗೂ ವಿವಿಧ ರೀತಿಯ ಗಂಡಾಂತರ ಅಥವಾ ಅಡೆತಡೆಗಳನ್ನು ಎದುರಿಸುತ್ತಿರುತ್ತದೆ. ಈ ಹೋರಾಟದಲ್ಲಿ ಯಾವುದು ಜಯ ಗಳಿಸುತ್ತದೆಯೋ ಅದು ಬದುಕುತ್ತದೆ. ಸಂತಾನೋತ್ಪತ್ತಿ ಮಾಡುತ್ತದೆ ಮತ್ತು ತನ್ನ ಬದುಕನ್ನು ಸಾರ್ಥಕಪಡಿಸಿಕೊಳ್ಳುತ್ತದೆ.

	4. ವಿಭಿನ್ನತೆ: ಡಾರ್ವಿನ್ನನ ಲಕ್ಷ್ಯಕ್ಕೆ ಬಂದ ಮತ್ತೊಂದು ನೈಸರ್ಗಿಕ ಸಂಗತಿಯೆಂದರೆ ಜೀವಿಗಳಲ್ಲಿ ಕಂಡುಬರುವ ವಿಭಿನ್ನತೆ. ಲೈಂಗಿಕವಾಗಿ ಸಂತಾನೋತ್ಪತ್ತಿ ಮಾಡುವ ಪ್ರಭೇದದ ಜೀವಿಗಳಲ್ಲಿ ಇದು ಅಪಾರ. ವ್ಯಕ್ತಿವಿಶಿಷ್ಟವಾದ ವಿವಿಧತೆಗಳು ಎತ್ತರ, ವರ್ಣವಿನ್ಯಾಸ, ದೇಹಕ್ರಿಯೆ, ಹೊರ ಮತ್ತು ಒಳ ಅಂಗ ಮೊದಲಾದವುಗಳಲ್ಲಿ ಎದ್ದು ಕಾಣುತ್ತವೆ. ಅಲ್ಲದೆ ಮಾನವ ತನ್ನ ಪ್ರಯತ್ನದಿಂದ ವೃದ್ಧಿಪಡಿಸಿಕೊಂಡ ಸಾಕುಪ್ರಾಣಿ ಮತ್ತು ಸಾಗುವಳಿ ಸಸ್ಯಗಳಲ್ಲಿ ಕಂಡುಬರುವ ಉಪಯುಕ್ತ ವಿಭಿನ್ನತೆಗಳು (ಉದಾಹರಣೆಗೆ ಮೂಲನಾಯಿಯಿಂದ ಎಷ್ಟೊಂದು ಬಗೆಯ ನಾಯಿಗಳು, ಮೂಲಪಾರಿವಾಳದಿಂದ ಇನ್ನೂರಕ್ಕೂ ಹೆಚ್ಚು ವಿಭಿನ್ನಪಾರಿವಾಳಗಳು, ಭಾರತದ ಕಾಡುಕೋಳಿಯಿಂದ ಲೆಗ್‍ಹಾರನ್, ಬಾಂಟಮ್, ಮಿನೊರ್ಕಾಸ್ ಪ್ಲಿಮತ್‍ರಾಕ್, ಮೊದಲಾದ ಕೋಳಿಗಳು) ಹಾಗೂ ಸಸ್ಯಜಗತ್ತಿನಲ್ಲಿ ಟೊಮ್ಯಾಟೊ, ಎಲೆಕೋಸು, ಬತ್ತ, ಗೋಧಿ, ಕಬ್ಬು ಮೊದಲಾದ ಸಾಗುವಳಿ ಸಸ್ಯಗಳಲ್ಲಿ ಕಂಡುಬರುವ ಬಗೆಬಗೆಯ ವಿಭಿನ್ನತೆಗಳು ಇವೆಲ್ಲವನ್ನೂ ಡಾರ್ವಿನ್ ಗಮನಿಸಿದ.

	5. ಯೋಗ್ಯತಮಜೀವಿಗಳ ಉಳಿಯುವಿಕೆ: ಸಾಕುಪ್ರಾಣಿ ಮತ್ತು ಸಾಗುವಳಿ ಸಸ್ಯಗಳಲ್ಲಿ ಕಂಡುಬರುವ ವಿಭಿನ್ನತೆಗಳಿಗೆ ಮಾನವನ ಪ್ರಯತ್ನ ಅಥವಾ ಆಯ್ಕೆಯೇ ಕಾರಣವಿರಬೇಕೆಂದು ಡಾರ್ವಿನ್ ತರ್ಕಿಸಿದ. ಹೀಗೆಯೇ ಪ್ರಕೃತಿಯಲ್ಲಿ ಕೂಡ ಜೀವಿಗಳಲ್ಲಿ ಕಂಡುಬರುವ ಉಪಯುಕ್ತ ವಿಭಿನ್ನತೆಗಳು ಪರಿಸರದ ಕೃಪಾಪೋಷಣೆಗೆ ಹೆಚ್ಚು ಪಾತ್ರವಾದರೆ ಅಂಥ ಜೀವಿಗಳು ಇತರ ಬಗೆಯವಕ್ಕಿಂತ ಹೆಚ್ಚು ಸಫಲವಾಗಿ ನಿಸರ್ಗದಲ್ಲಿ ನಡೆಯುವ ಬದುಕಿಗಾಗಿ ಹೋರಾಟದಲ್ಲಿ ಜಯಗಳಿಸಿ ತಮ್ಮ ಸಂತಾನವನ್ನು ಮುಂದುವರಿಸಿಕೊಂಡು ಬರುತ್ತವೆ. ಉದಾಹರಣೆಗೆ ಒಂದು ಪ್ರಭೇದದ ಪಕ್ಷಿಗಳಲ್ಲಿ ಒಂದು ಪಕ್ಷಿಗೆ ಉಳಿದವಕ್ಕಿಂತ ದೊಡ್ಡ ರೆಕ್ಕೆಗಳು ಪ್ರಾಪ್ತವಾದರೆ ಅದು ಹೆಚ್ಚು ಸುಲಭವಾಗಿ, ಸರಾಗವಾಗಿ ಹಾರಿ ಶತ್ರುಗಳಿಂದ ತಪ್ಪಿಸಿಕೊಳ್ಳಬಲ್ಲುದು. ಬದುಕಿಗಾಗಿ ಹೋರಾಟದಲ್ಲಿ ಇದು ಯಶಸ್ವಿಯಾಗಿ ಉಳಿಯಬಲ್ಲುದು. ಈ ಜಯಕ್ಕೆ ಕಾರಣ ಅದರ ದೊಡ್ಡ ರೆಕ್ಕೆಗಳು. ಈ ರೀತಿಯ ಯಶಸ್ಸನ್ನು ಡಾರ್ವಿನ್ ನೈಸರ್ಗಿಕ ಆಯ್ಕೆ ಅಥವಾ ಪ್ರಕೃತಿ ಕೈವಾಡವೆಂದು ಕರೆದ. ಇದೇ ಡಾರ್ವಿನ್ ದೃಷ್ಟಿಯಲ್ಲಿ ಜೀವಿವಿಕಾಸದ ಕ್ರಿಯಾತಂತ್ರ. ಇದರಲ್ಲಿ ಯೋಗ್ಯತಮವಾದವು ಉಳಿದು ಯೋಗ್ಯತಮವಲ್ಲದವು ಅಥವಾ ಕಳಪೆಯಾದವು ನಾಶವಾಗುತ್ತವೆ. ನಿಸರ್ಗದಲ್ಲಿ ಬಲಾಢ್ಯ ಜೀವಿಗಳ ಉಳಿವು ಮತ್ತು ಪ್ರಾಬಲ್ಯಗಳಿಗೆ ಇದೇ ಕಾರಣ. ಜೀವಿಗಳಲ್ಲಿ ಪ್ರಕೃತಿಯ ಪಕ್ಷಪಾತಕ್ಕೆ ಪಾತ್ರವಾದ ಹಾಗೂ ಉಪಯುಕ್ತವಾದ ಸಣ್ಣಸಣ್ಣ ವಿಭಿನ್ನತೆಗಳು ಆಯಾ ಪೀಳಿಗೆಯ ಜೀವಿಗಳಿಗೆ ಮಾತ್ರ ಸೀಮಿತವಾದವಲ್ಲವೆಂದೂ ಇವು ಅನುವಂಶಿಕವಾದುವೆಂದೂ ಡಾರ್ವಿನ್ ಮನಗಂಡ. ಆದರೆ ಡಾರ್ವಿನ್ ಜೀವಿವಿಕಾಸದ ಸಿದ್ಧಾಂತವನ್ನು ರೂಪಿಸುವ ಕಾಲಕ್ಕೆ ಆನುವಂಶಿಕ e್ಞÁನ ಬೆಳೆದುಬಂದಿರಲಿಲ್ಲ. ಈತನಿಗೆ ನಿಜವಾದ ಅನುವಂಶೀಯತೆಯ ಪರಿಚಯವಿರಲಿಲ್ಲ. ಈ ಕಾರಣದಿಂದಲೇ ಆ ಕಾಲದಲ್ಲಿ ಪ್ರಚಾರವಾಗಿದ್ದ ಲಮಾರ್ಕ್ ನಿಯಮಕ್ಕೆ ಶರಣುಹೋಗಿ ಅದನ್ನು ಸತ್ತ್ವಯುತವಾಗಿ ತನ್ನದೇ ಆದ ವಾದಸರಣಿಯಿಂದ ವಿವರಿಸಿದ. ಒಂದು ಮೂಲಪ್ರಭೇದದ ಜೀವಿಗಳಲ್ಲಿ ಕಾಲಾನುಕಾಲಕ್ಕೆ ಹಲವಾರು ಸಣ್ಣ ಸಣ್ಣ ವಿಭಿನ್ನತೆಗಳು ಸಂಗ್ರಹವಾಗುತ್ತ ಬಂದು ಅವು ಮೂಲಪ್ರಭೇದದಿಂದ ವಿಭಿನ್ನವಾಗುತ್ತವೆಯೆಂದೂ ತತ್ಫಲವೇ ಹೊಸ ಜೀವಿಪ್ರಭೇದದ ಉಗಮವೆಂದೂ ಡಾರ್ವಿನ್ ತರ್ಕಿಸಿದ.

	ನವಡಾರ್ವಿನ್ ಸಿದ್ಧಾಂತ (ನಿಯೋಡಾರ್ವಿನಿಸಮ್): ಡಾರ್ವಿನ್ ಸಿದ್ಧಾಂತ ಹಲವು ವರ್ಷಗಳ ಕಾಲ ವಿವಾದಗ್ರಸ್ತವಾಗಿಯೇ ಉಳಿದಿತ್ತು. ಇಂದು ಕೂಡ ಅಲ್ಲಲ್ಲಿ ಹಲವಾರು ಅವೈe್ಞÁನಿಕರು ಡಾರ್ವಿನ್ ವಾದವನ್ನು ಟೀಕಿಸುತ್ತಾರೆ. ಡಾರ್ವಿನ್ನನ ಸಮಕಾಲೀನ ವಿe್ಞÁನಿಗಳಿಗೆ ಪ್ರಾಗ್ಜೀವಿಶಾಸ್ತ್ರ (ಪೇಲಿಯೆಂಟಾಲಜಿ) ತುಲನಾತ್ಮಕ ರೂಪರಚನಾಶಾಸ್ತ್ರ, ಅಂಗರಚನಾಶಾಸ್ತ್ರ ಮತ್ತು ಭ್ರೂಣಶಾಸ್ತ್ರಗಳು ಜೀವಿವಿಕಾಸವಾದಕ್ಕೆ ಸಾಕ್ಷ್ಯಾಧಾರಗಳನ್ನು ಒದಗಿಸುವಂತಿದುದರಿಂದ ಅವರು ಈ ವಾದವನ್ನು ಅನುಮೋದಿಸಿದರು ಹಾಗೂ ಸ್ವಾಗತಿಸಿದರು. ಅಲ್ಲದೆ ಇಂಗ್ಲೆಂಡಿನ ತಾಮಸ್ ಹಕ್ಸಲೀ (1825-1895) ಮತ್ತು ಹರ್ಬರ್ಟ್ ಸ್ಪೆನ್ಸರ್, ಅಮೆರಿಕದ ಮತ್ಸ್ಯವಿe್ಞÁನಿ ಡೇವಿಡ್ ಸ್ಟಾರ್ ಜೋರ್ಡೆನ್ ಮತ್ತು ಆಸ ಗ್ರೇ, ಜರ್ಮನಿಯ ವರ್ಗೀಕರಣ ವಿe್ಞÁನಿ ಎರ್ನ್‍ಸ್ಟ್ ಹೆಕೆಲ್ (1834-1919) ಮತ್ತು ಭ್ರೂಣವಿe್ಞÁನಿ ಆಗಸ್ಟ್ ವೈಸ್ಮನ್ ಮೊದಲಾದವರು ಈ ವಾದವನ್ನು ತಮ್ಮ ತಮ್ಮ ದೇಶಗಳಲ್ಲಿ ಪ್ರಚುರಪಡಿಸಿದರು. ನಿಜಕ್ಕೂ ಹತ್ತೊಂಬತ್ತನೆಯ ಶತಮಾನ ಈ ವಾದದ ರಮ್ಯ (ರೊಮ್ಯಾಂಟಿಕ್) ಕಾಲ ಆಗಿತ್ತು.

	ಡಾರ್ವಿನ್ ಜೀವಿವಿಕಾಸದ ಬಗ್ಗೆ ಸರಿಯಾದ ಹಾದಿಯಲ್ಲಿ ಹೆಜ್ಜೆಯಿಟ್ಟಿದ್ದರೂ ಈ ಸಿದ್ಧಾಂತವು ನಿಸರ್ಗದ ಪಾತ್ರವನ್ನು ಸಾಕಷ್ಟು ತೃಪ್ತಿಕರವಾಗಿ ವಿವರಿಸಲು ಅಸಮರ್ಥವಾಗಿತ್ತು. ಪ್ರಕೃತಿಯಲ್ಲಿ ಕಂಡುಬರುವ ಕೆಲವು ಅಂಶಗಳನ್ನು ವಿವರಿಸಲು ಅಶಕ್ತವಾಗಿತ್ತು. ಡಾರ್ವಿನ್ನನಿಗೆ ಜೀವಿಗಳಲ್ಲಿ ಕಂಡುಬರುವ ಆರ್ಜಿತ ಹಾಗೂ ಆನುವಂಶಿಕ ಗುಣಲಕ್ಷಣಗಳನ್ನು ವಿಂಗಡಿಸುವ ತಿಳಿವಳಿಕೆಯಿರಲಿಲ್ಲ; ನಿಜವಾದ ಅನುವಂಶೀಕತೆಯ ಪರಿe್ಞÁನವಿರಲಿಲ್ಲ. ಅಲ್ಲದೆ ಜೀವಿಗಳಲ್ಲಿ ಎದ್ದು ಕಾಣುವ ವಿಭಿನ್ನತೆಗಳಿಗೆ ಮೂಲವೇನೆಂಬುದು ಆತನಿಗೆ ತಿಳಿದಿರಲಿಲ್ಲ. ಆತನ ದೃಷ್ಟಿಯಲ್ಲಿ ಪ್ರಕೃತಿ ಕೈವಾಡವು ಪರಿಮಿತೀಯ ಬಲವಾಗಿತ್ತೇ (ಲಿಮಿಟಿಂಗ್ ಫೋರ್ಸ್) ವಿನಾ ಪ್ರವರ್ತಕ ಬಲ (ಇನಿಷಿಯೇಟಿಂಗ್ ಫೋರ್ಸ್) ಆಗಿರಲಿಲ್ಲ. ಜೀವಿಗಳ ಆನುವಂಶಿಕ ಗುಣಲಕ್ಷಣಗಳ ಜೀನ್‍ಗಳ ನಿಯಂತ್ರಣಕ್ಕೆ ಒಳಪಟ್ಟಿರುವುದರಿಂದ ಉಪಯುಕ್ತವಾದ ಜೀನ್‍ಗಳು ಪರಿಸರದ ಕೃಪಾಪೋಷಣೆಗೆ ಪಾತ್ರವಾಗುತ್ತದೆ. ಅಂಥ ಜೀನ್‍ಗಳ ಸಂಖ್ಯೆ ಸಂತಾನೋತ್ಪತ್ತಿಯ ಫಲವಾಗಿ ಅಧಿಕಗೊಳ್ಳುತ್ತದೆ. ಪರಿಸರವಿಲ್ಲದೆಯೇ ಗುಣವಿಶೇಷಗಳು ಅರ್ಥಾತ್ ಜೀನ್‍ಗಳು ಜೀವಿಗೆ ಪ್ರಾಪ್ತವಾಗುತ್ತವೆ. ಪ್ರಕೃತಿಯ ಆಯ್ಕೆ ಎಂದಿಗೂ ಆನುವಂಶಿಕ ಬದಲಾವಣೆಗಳನ್ನು ಸೃಷ್ಟಿಸುವುದಿಲ್ಲ. ಅದು ಜೀವಿಗಳಲ್ಲಿ ರೂಪುಗೊಂಡ ಬದಲಾವಣೆಗಳನ್ನು ಪರಿಸರಕ್ಕೆ ಅನುಗುಣವಾಗಿ ವಿಕಾಸಗತಿಯಲ್ಲಿ ನಿಯಂತ್ರಿಸುತ್ತದೆ.

	ಜೀವಿಶಾಸ್ತ್ರದ ಅಧ್ಯಯನದಲ್ಲಿ 20ನೆಯ ಶತಮಾನದ ಮೊದಲೆರಡು ದಶಕಗಳಲ್ಲಿ ಕೆಲವು ಪ್ರಮುಖ ಘಟನೆಗಳು ಜರಗಿದವು. ಇವು ಮೇಲುನೋಟಕ್ಕೆ ಡಾರ್ವಿನ್ ಸಿದ್ಧಾಂತವನ್ನು ಅಲ್ಲಗಳೆಯುವಂತೆ ತೋರಿದರೂ ನವಡಾರ್ವಿನ್ ವಾದಕ್ಕೆ ಭದ್ರ ಬುನಾದಿಯಾದುವೆಂದೇ ಹೇಳಬಹುದು. ಈ ಘಟನೆಗಳಲ್ಲಿ ಮುಖ್ಯವಾದವು: 1. 1900ರಲ್ಲಿ ಗ್ರೆಗೊರ್ ಮೆಂಡಲನ ಸಿದ್ಧಾಂತಗಳ ಪುನರುತ್ಥಾನ. ತಳಿವಿe್ಞÁನಿಗಳು ಜೀನ್‍ಗಳೇ ಜೀವಿಗಳ ಗುಣಲಕ್ಷಣಗಳಿಗೆ ಮೂಲಾಧಾರಗಳೆಂದು ಪ್ರತಿಪಾದಿಸಿ ಮೆಂಡಲನ ವಾದಕ್ಕೆ ಮನ್ನಣೆ ಕೊಟ್ಟರು. ಅಲ್ಲದೆ ಜೀನ್‍ಗಳು ಸ್ಥಿರಸ್ಥಾಯಿಗಳೆಂದೂ ಬದಲಾವಣೆ ಹೊಂದದ ಘಟಕಗಳೆಂದೂ ವಾದಿಸಿ ಪ್ರಕೃತಿ ಕೈವಾಡದಲ್ಲಿ ಶಂಕೆಯನ್ನು ವ್ಯಕ್ತಪಡಿಸಿದರು. 2. ಹಾಲೆಂಡಿನ ಸಸ್ಯವಿe್ಞÁನಿ ಹ್ಯುಗೊ ಡೆ ವ್ರೀಸ್ (1848-1935)  ಈನೋತೀರ ಜಾತಿಯಗಿಡಗಳ (ಸಂಜೆಮಲ್ಲಿಗೆ) ಮೇಲೆ ಸಂಶೋಧನೆ ನಡೆಸಿ ಅವುಗಳಲ್ಲಿ ಹಠಾತ್ತನೆ ಉದ್ಭವಿಸುವ ಆನುವಂಶಿಕ ಬದಲಾವಣೆಗಳನ್ನು ಕಂಡುಹಿಡಿದದ್ದು (1901). ಈತ ಇಂಥ ಬದಲಾವಣೆಗಳಿಗೆ ಮ್ಯೂಟೇಷನ್ ಅಥವಾ ವಿಕೃತಿಗಳೆಂದು ಹೆಸರು ಕೊಟ್ಟು ಅವು ಜೀವಿ ವಿಕಾಸದಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತವೆಂದು ವಾದಿಸಿದ. ಸಾಮಾನ್ಯ ಕಾಲುಗಳ ಕುರಿಮಂದೆಯಲ್ಲಿ ಗಿಡ್ಡಕಾಲಿನ ಕುರಿಯೊಂದು ಆಕಸ್ಮಿಕವಾಗಿ ಹುಟ್ಟಿದ್ದುದು ಡಾರ್ವಿನ್ನನ ಗಮನಕ್ಕೆ ಬಂದಿದ್ದರೂ ಅದನ್ನು ವೈಲಕ್ಷಣ್ಯ (ಸ್ಪೋರ್ಟ್) ಎಂದು ಪರಿಗಣಿಸಿ ಅದಕ್ಕೆ ಜೀವಿವಿಕಾಸದ ಸಿದ್ಧಾಂತದಲ್ಲಿ ಮಹತ್ತರ ಸ್ಥಾನವನ್ನು ಕೊಟ್ಟಿರಲಿಲ್ಲ. ಆದರೆ ಡೆ ವ್ರೀಸ್ ಇಂಥ ವಿಕೃತಿಗಳಿಗೆ ಪ್ರಾಮುಖ್ಯವನ್ನು ಕೊಟ್ಟು ಇವು ಹೊಸ ಹೊಸ ಜೀವಿ ಪ್ರಭೇದಗಳಿಗೆ ಕಾರಣವಾಗುತ್ತವೆ ಎಂದು ವಾದಿಸಿದ. 3. ಡೆನ್ಮಾರ್ಕಿನ ಸಸ್ಯವಿe್ಞÁನಿ ಡಬ್ಲ್ಯು. ಯೋಹಾನ್ಸೆನ್ (1885-1927) ಎಂಬಾತ ತಿಂಗಳು ಹುರುಳಿ ಬೀಜದ ತೂಕಕ್ಕೆ ಸಂಬಂಧಿಸಿದಂತೆ ತಳಿ ವೈe್ಞÁನಿಕ ಸಂಶೋಧನೆಗಳನ್ನು ನಡೆಸಿ (1909) ಶುದ್ಧ ಸಂತಾನದ (ಪ್ಯೂರ್ ಲೈನ್) ಅಭಿಪ್ರಾಯವನ್ನು ಬೆಳೆಸಿದ್ದು. ಈತ ತನ್ನ ಪ್ರಯೋಗ ಪರೀಕ್ಷೆಗಳ ಮೂಲಕ ಆಯ್ಕೆಯು ಆನುವಂಶಿಕ ವಿಭಿನ್ನತೆಗಳನ್ನುಳ್ಳ ಸಂತಾನಗಳಲ್ಲಿ ಮಾತ್ರ ಪ್ರಭಾವಶಾಲಿಯೆಂದೂ ಆಹಾರ, ಬೆಳಕು, ಉಷ್ಣತೆ, ತೇವ, ಗೊಬ್ಬರ ಮೊದಲಾದ ಪರಿಸರದ ಪ್ರಭಾವದಿಂದ ರೂಪುಗೊಂಡ ವಿಭಿನ್ನತೆಗಳಲ್ಲಿ ಪ್ರಮುಖವಲ್ಲವೆಂದೂ ತೋರಿಸಿಕೊಟ್ಟ. 4. ಪ್ರಕೃತಿಯಲ್ಲಿ ಬೃಹದ್ವಿಕೃತಿ (ಮ್ಯಾಕ್ರೋಮ್ಯೂಟೇಷನ್) ಹಾಗೂ ಸೂಕ್ಷ್ಮ ವಿಕೃತಿಗಳು ಮ್ಯಾಕ್ರೋಮ್ಯೂಟೇಷನ್ ನಡೆಯುತ್ತಿರುತ್ತವೆ ಎಂದೂ ಮೊದಲನೆಯದು ಅಪರೂಪವೆಂದೂ ಎರಡನೆಯದು ಸರ್ವೇಸಾಮಾನ್ಯ ಘಟನೆಯೆಂದೂ ತಿಳಿದುಬಂದದ್ದು. ಬಯಲುಜೀವಿಗಳನ್ನು (ವೈಲ್ಡ್ ಫಾರಮ್ಸ್) ಪ್ರಯೋಗಮಂದಿರದಲ್ಲಿ ಸಾಕಿ ಅಧ್ಯಯನ ನಡೆಸಿದಾಗ ಪ್ರಕೃತಿಯಲ್ಲಿ ಶುದ್ಧ ಸಂತಾನಗಳು ದೊರಕುವುದು ಅತಿದುರ್ಲಭವೆಂದು ತಿಳಿದು ಬಂತು. 5. ಇಂಗ್ಲೆಂಡಿನ ಗಣಿತಶಾಸ್ತ್ರಜ್ಞ ಜಿ. ಎಚ್. ಹಾರ್ಡಿ 1908ರಲ್ಲಿ ಮತ್ತು ಜರ್ಮನಿಯ ವೈದ್ಯ ಡಬ್ಲ್ಯು. ವೈನ್‍ಬರ್ಗ್ (1862-1939) ಇವರು ಬಯಲುಜೀವಿಗಳ ಜೀವಿಸಂದಣಿ ತಳಿವಿe್ಞÁನಕ್ಕೆ ಅಂಕೆ ಅಂಶಗಳ ಸೂಕ್ತ ವಿಧಾನಗಳನ್ನು ಉಪಯೋಗಿಸಿ ಅನುವಂಶೀಯತೆಯ ಸಮತೋಲನವನ್ನು (ಜೆನೆಟಿಕ್ ಈಕ್ವಿಲಿಬ್ರಿಯಮ್) ಸೂಚಿಸುವ ಒಂದು ಗಣಿತೀಯ ಪ್ರತಿರೂಪವನ್ನು ಸೂಚಿಸಿದ್ದು. ಇದು ವಾಸ್ತವವಾಗಿ ಜೀವಿ ವಿಕಾಸದ ಅಧ್ಯಯನಕ್ಕೆ ಮಾರ್ಗದರ್ಶಿ ಹಾಗೂ ಅಳತೆಗೋಲು ಆದುದೇ ಅಲ್ಲದೆ ಒಂದು ದೃಢವಾದ ಅಡಿಪಾಯವೂ ಆಯಿತು. ಇವರು ಕೊಟ್ಟ ಸೂತ್ರಕ್ಕೆ ಹಾರ್ಡಿ-ವೈನ್‍ಬರ್ಗ್ ನಿಯಮವೆಂಬ ಹೆಸರು ಬಂತು. ಈ ನಿಯಮದ ಪ್ರಕಾರ ಒಂದು ಜೀವಿಸಂದಣಿಯಲ್ಲಿ ಒಂದು ಜೀನ್ ಎರಡು ಪರ್ಯಾಯರೂಪಿ ಜೀನ್‍ಗಳಾಗಿರುತ್ತವೆ (ಅಲೀಲುಗಳು). ಇವು ಒಂದು ಗೊತ್ತಾದ ಅನುಪಾತದಲ್ಲಿದ್ದರೆ, ಆ ಸಂದಣಿಯ ಎಲ್ಲ ಗಂಡುಹೆಣ್ಣುಗಳು ಸ್ವೇಚ್ಫೆ ಸಂಗಮಗಳಾಗಿ ಸಂತಾನೋತ್ಪತ್ತಿ ಮಾಡಿದರೆ, ಪ್ರತಿ ಹೆಣ್ಣೂ ಸಮಸಂಖ್ಯೆಯಲ್ಲಿ ಸಂತಾನಗಳನ್ನು ಬೆಳೆಸಿದರೆ, ವಿಕೃತಿ ಅಲ್ಲಿ ತಲೆದೋರದಿದ್ದರೆ, ಆಯ್ಕೆಯ ಒತ್ತಡಗಳು ಪ್ರಭಾವ ಬೀರದಿದ್ದರೆ, ಜೀವಿಗಳು ವಲಸೆ ಹೋಗದಿದ್ದರೆ ಜೀವಿಸಂದಣಿಯಲ್ಲಿ ಕಂಡುಬರುವ ಅಲೀಲುಗಳ ಮೊದಲ ಅನುಪಾತವೇ ಮುಂದಿನ ಪೀಳಿಗೆಯಲ್ಲೂ ಸ್ಥಿರವಾಗಿರುತ್ತದೆ. ಅಂದರೆ ಒಂದು ಜೀವಿಸಂದಣಿಯ ಆನುವಂಶಿಕ ಸಮತೋಲದಲ್ಲಿ ಅಂದರೆ ಜೀನ್‍ಗಳ ಆವರ್ತಾಂಕಗಳಲ್ಲಿ ಬದಲಾವಣೆಗಳಾಗದಿದ್ದರೆ ವಿಕಾಸದ ದರ ಸೊನ್ನೆಯಾಗಿರುತ್ತದೆ. ಈ ನಿಯಮ ಕಲ್ಪಿಸಿಕೊಂಡಂತೆ "ರೆ"ಗಳು ಆದರ್ಶವಾದವುಗಳಲ್ಲ. ಏಕೆಂದರೆ ಹೆಣ್ಣು ಗಂಡುಗಳಲ್ಲಿ ಹಲವಾರು ಜೀನ್‍ಗಳು ಪರ್ಯಾಯರೂಪದಲ್ಲಿ ಇರುವುದರಿಂದ ಲೈಂಗಿಕ ಸಂತಾನೋತ್ಪತ್ತಿಯ ಫಲವಾಗಿ ಅವು ಪುನರ್ಮಿಶ್ರಣಗೊಳ್ಳುತ್ತಿರುತ್ತವೆ. ಇದರ ಫಲವಾಗಿ ಜೀವಿಗಳಲ್ಲಿ ವೈಯಕ್ತಿಕ ವಿಭಿನ್ನತೆಗಳೂ ಮೂಡುತ್ತಿರುತ್ತವೆ.

	ಜೀವಕೋಶ ವಿe್ಞÁನ, ತಳಿ ವಿe್ಞÁನ, ಪರಿಸರ ವಿe್ಞÁನ, ಜೀವಿಸಂದಣಿ ತಳಿ ವಿe್ಞÁನ (ಪಾಪ್ಯುಲೇಷನ್ ಜೆನೆಟಿಕ್ಸ್) ಮತ್ತು ಜೀವಿಸಂದಣಿಸಂಖ್ಯಾಕಲನಶಾಸ್ತ್ರಗಳ ಕ್ಷೇತ್ರಗಳಲ್ಲಿ 1900-1925ರ ವರೆಗೆ ನಡೆದ ಸಂಶೋಧನೆಗಳು ಡಾರ್ವಿನ್ನನ ಜೀವಿವಿಕಾಸವಾದಕ್ಕೆ ಮನ್ನಣೆಯನ್ನು ಕೊಡಲಿಲ್ಲ. ಆದ್ದರಿಂದ ಈ ಅವಧಿಯನ್ನು ಗ್ರಹಣಕಾಲ ಅಥವಾ ಆಜ್ಞೇಯತಾಕಾಲ (ಆಗ್ನಾಸ್ಟಿಕ್ ಪೀರಿಯಡ್) ಎಂದು ಕರೆದರು. 1925ರಿಂದೀಚೆಗೆ ಇಂಗ್ಲೆಂಡಿನ ಜೂಲಿಯನ್ ಹಕ್ಸ್ಲೀ, ರೊನಾಲ್ಡ್ ಎ. ಫಿಷರ್ ಮತ್ತು ಜೆ.ಬಿ.ಎಸ್. ಹಾಲ್ಡೇನ್ ಮತ್ತು ಅಮೆರಿಕದ ಸೆವಾಲ್ ರೈಟ್, ಎಚ್.ಜೆ.ಮುಲ್ಲರ್, ತೀಯೊಡರ್ ಡಾಬ್ಜಾನ್‍ಸ್ಕಿ ಮತ್ತು ರಿಚರ್ಡ್ ಗೋಲ್ಡ್ ಷ್ಮಿಟ್ ಮೊದಲಾದವರ ಸಂಶೋಧನೆಗಳು ಜೀವಿವಿಕಾಸವಾದಕ್ಕೆ ಹೊಸ ತಿರುವನ್ನು ಕೊಟ್ಟು ಪ್ರಕೃತಿ ಕೈವಾಡವೇ ಜೀವಿವಿಕಾಸದ ಜೀವನಾಡಿಯೆಂದು ಸ್ಥಿರೀಕರಿಸಿವೆ. ಡಾರ್ವಿನ್ನನ ನೈಸರ್ಗಿಕ ಆಯ್ಕೆಯ ತತ್ತ್ವ ಹೊಸರೂಪವನ್ನು ಹಾಗೂ ಚೈತನ್ಯವನ್ನು ಪಡೆದಿದೆ. ನವಡಾರ್ವಿನ್ ಸಿದ್ಧಾಂತದ ಪ್ರಕಾರ:

	1. ಜೈವವಿಭವ ಜೀವಿಗಳಲ್ಲಿ ಅಪಾರವಾದದು. ಇದನ್ನೇ ಜೀವಿಗಳಲ್ಲಿ ಅತಿ ಸಂತಾನ ಎಂದು ಡಾರ್ವಿನ್ ಕರೆದಿದ್ದ. 2. ಪ್ರತಿಯೊಂದು ಜೀವಿಯಲ್ಲೂ ಆನುವಂಶಿಕ ಹಾಗೂ ಆನುವಂಶಿಕವಲ್ಲದ ಅಂದರೆ ಪರಿಸರದ ಪ್ರಭಾವದಿಂದ ರೂಪುಗೊಂಡ ಗುಣಲಕ್ಷಣಗಳಿರುತ್ತವೆ. ಡಾರ್ವಿನ್ನನಿಗೆ ಇವೆರಡೂ ಒಂದೇ ಎಂಬ ಭಾವನೆಯಿತ್ತು. ಆನುವಂಶಿಕವಲ್ಲದ ಗುಣಲಕ್ಷಣಗಳು ಪೀಳಿಗೆಯಿಂದ ಪೀಳಿಗೆಗೆ ಮುಂದುವರಿಯುವುದಿಲ್ಲ. ಆನುವಂಶಿಕ ವಿಭಿನ್ನತೆಗಳು ಹಲವು ಬಗೆಯವು. ಇವು ಭೌಗೋಳಿಕ ವಿಭಿನ್ನತೆಗಳಾಗಿರಬಹುದು. ಜೀನ್ ಸಂರಚನಾತ್ಮಕ ವಿಭಿನ್ನತೆಗಳಾಗಿರಬಹುದು. ವಯಸ್ಸಿಗೆ ಸಂಬಂಧಿಸಿದ ವಿಭಿನ್ನತೆಗಳಾಗಿರಬಹುದು ಅಥವಾ ಲೈಂಗಿಕ ವಿಭಿನ್ನತೆಗಳಾಗಿರಬಹುದು. ಜೀವಿಯಲ್ಲಿ ಕಂಡುಬರುವ ಆನುವಂಶಿಕ ವಿಭಿನ್ನತೆಗಳಿಗೆ ಜೀನ್‍ಗಳಲ್ಲಿ ಕಂಡುಬರುವ ವಿಭಿನ್ನತೆಗಳೇ ಕಾರಣ. ಒಂದೇ ದಾಂಪತ್ಯದಿಂದ ಹುಟ್ಟಿದ ಮರಿಮಕ್ಕಳಿಗೆಲ್ಲ ಈ ತತ್ತ್ವ ಅನ್ವಯಿಸುತ್ತದೆ. ಅಂದಮೇಲೆ ಜೀವಿಗಳಲ್ಲಿ ತಾರತಮ್ಯ ಅಥವಾ ವ್ಯತ್ಯಾಸಗಳಿದ್ದ ಮೇಲೆ ಕೆಲವು ಜೀವಿಗಳು ಪರಿಸರದೊಂದಿಗೆ ಇತರರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಹೊಂದಿಕೊಂಡಿರುತ್ತವೆ. ಅತ್ಯುತ್ತಮವಾಗಿ ಹೊಂದಿಕೊಂಡ ಜೀವಿಗಳು ಕಾಲಕ್ರಮೇಣ ಯಶಸ್ವಿಯಾಗಿ ಬದುಕುತ್ತವೆ; ಸಂತಾನೋತ್ಪತ್ತಿ ಮಾಡುತ್ತವೆ. ಅಂದರೆ ಉಪಯುಕ್ತ ಜೀವಿಗಳು ಮುಂದಿನ ಪೀಳಿಗೆಗಳಿಗೆ ಸಾಗುತ್ತವೆ. ಇತರ ಜೀವಿಗಳು ಬಾಳಿನ ಸ್ಪರ್ಧೆಯಲ್ಲಿ ಸೋತು ನಿರ್ನಾಮವಾಗುವುದರಿಂದ ಅವುಗಳ ದೇಹದೊಂದಿಗೇ ಅನುಪಯುಕ್ತ ಜೀನ್‍ಗಳು ಕಣ್ಮರೆಯಾಗುತ್ತವೆ. ಈ ದೃಷ್ಟಿಯಿಂದ ಪ್ರಕೃತಿ ಕೈವಾಡ ಕ್ರೂರ ವಿಧಾನದಂತೆ ತೋರಬಹುದು. ದುಂದುಗಾರಿಕೆಯಂತೆ ಕಂಡುಬರಬಹುದು. ಪ್ರಕೃತಿ ಕೈವಾಡದ ತೀವ್ರತೆ ಸಂತಾನದ ಸಂಖ್ಯೆಗೆ ತಕ್ಕಂತೆ ವ್ಯತ್ಯಾಸವಾಗುತ್ತದೆ. ಸಂತಾನ ರಕ್ಷಣೆ ಕೊಡದ ಪ್ರಾಣಿಗಳಲ್ಲಿ ಕಂಡುಬರುವ ದುಂದುಗಾರಿಕೆಯ ತೀವ್ರತೆ ಸಂತಾನ ರಕ್ಷಣೆ ಕೊಡುವ ಜೀವಿಗಳಿಗಿಂತ ಅಪಾರ.

	3. ಡಾರ್ವಿನ್ನನ ದೃಷ್ಟಿಯಲ್ಲಿ ಜೀವಿವಿಕಾಸವಾದ ಒಂದು ವ್ಯಕ್ತಿಗೆ ಸಂಬಂಧಿಸಿದ್ದು. ಆದರೆ ನವಡಾರ್ವಿನ್ ಸಿದ್ಧಾಂತದ ದೃಷ್ಟಿಯಲ್ಲಿ ಇದು ಇಡೀ ಜೀವಿಸಂದಣಿಯಲ್ಲಿ ಕಂಡುಬರುವ ಘಟನೆ. ಜೀವಿ ಸಂದಣಿಯ ಹೆಣ್ಣು ಮತ್ತು ಗಂಡುಗಳಲ್ಲಿ ಹಲವು ಜೀನ್‍ಗಳು ಪರ್ಯಾಯ ರೂಪದಲ್ಲಿರುವುದರಿಂದ ಲೈಂಗಿಕ ಸಂತಾನೋತ್ಪತ್ತಿಯ ಫಲವಾಗಿ ಪುನರ್‍ಮಿಶ್ರಣಗಳಾಗುತ್ತಿರುತ್ತವೆ. ಇದರಿಂದ ವೈಯಕ್ತಿಕ ವಿಭಿನ್ನತೆಗಳು ನಿರಂತರವಾಗಿ ಮೂಡುತ್ತಿರುತ್ತವೆ. ಹಾರ್ಡಿವೈನ್‍ಬರ್ಗ್ ನಿಯಮದ ಪ್ರಕಾರ ಆನುವಂಶಿಕ ಸಮತೋಲನ ಮುಂದುವರಿಯುತ್ತಿರುತ್ತದೆ. ಆದರೆ "ರೆ"ಗಳಲ್ಲಿ ಬದಲಾವಣೆಯಾದರೆ ವಿಕಾಸಕ್ಕೆ ಕೋಡಿ ಹರಿದಂತೆ. ಜೀವಿಸಂದಣಿ ಯಾವಾಗಲೂ ದೊಡ್ಡದಾಗಿರುವುದಿಲ್ಲ. ಜೀನ್‍ಗಳು ತದ್ರೂಪಿಯಾಗಿ ದ್ವಿಪ್ರತಿಗೊಳ್ಳುತ್ತಿದ್ದರೂ ಆಗಾಗ್ಗೆ ಆಕಸ್ಮಿಕವಾಗಿ ವಿಕೃತಿಗಳಾಗುತ್ತಿರುತ್ತವೆ. ಜೀವಿಸಂದಣಿಯ ಕೆಲವು ವ್ಯಕ್ತಿಗಳು ಸಂತಾನೋತ್ಪತ್ತಿ ಮಾಡದಿರಬಹುದು. ಕೆಲವು ವಲಸೆ ಹೋಗಿರಬಹುದು. ಈ ಬದಲಾವಣೆಗಳಿಂದ ಆನುವಂಶಿಕ ಸಮತೋಲನದಲ್ಲಿ ಬದಲಾವಣೆಗಳಾಗುತ್ತವೆ. ತತ್ಪಲವಾಗಿ ವಿಕಾಸಾತ್ಮಕ ಬದಲಾವಣೆಗಳಾಗುತ್ತವೆ.

	4. ಜೀವಿಸಂದಣಿ ಒಂದು ನಿರ್ದಿಷ್ಟವಾದ ಪರಿಸರದೊಂದಿಗೆ ಸಮರಸವಾಗಿ ಅಚ್ಚುಕಟ್ಟಾಗಿ ಬದುಕಲು ಹೊಂದಿಕೊಂಡಿರುತ್ತದೆ. ಅಲ್ಲದೆ ಪ್ರಕೃತಿ ಕೈವಾಡ ಕೇವಲ ಒಂದೆರಡು ಪೀಳಿಗೆಗಳಿಗೆ ಸೀಮಿತವಾಗಿರುವುದಿಲ್ಲ. ಅದು ಹಲವಾರು ಪೀಳಿಗೆಗಳ ಕಾಲ ಕ್ರಿಯಾತ್ಮಕವಾಗಿರುವುದರಿಂದ ಪರಿಸರದ ಆಯ್ಕೆಯ ಒತ್ತಡಗಳು ಅಪರೂಪವಾಗಿರುವಂತೆ ಕಂಡುಬರುತ್ತವೆ. ಆಯ್ಕೆಯ ಒತ್ತಡದ ಪ್ರಭಾವವನ್ನು ಒಂದು ಉದಾಹರಣೆಯಿಂದ ನಿರೂಪಿಸಬಹುದು. ನೂರು ವರ್ಷಗಳ ಹಿಂದೆ ಇಂಗ್ಲೆಂಡ್ ಮತ್ತು ಅದರ ಸಮೀಪದ ದೇಶಗಳಲ್ಲಿ ಬಿಸ್ಟನ್‍ಬೆಟುಲೇರಿಯ ಜಾತಿಯ ಪತಂಗಗಳು ಬಿಳಿಯ ಅಥವಾ ಮಾಸಲು ಬಣ್ಣದಿಂದ ಕೂಡಿದ್ದುವು. ಆ ಪ್ರದೇಶದಲ್ಲಿ ಗಿರಣಿ ಕಾರ್ಖಾನೆಗಳು ಸ್ಥಾಪನೆಯಾಗುವುದಕ್ಕಿಂತ ಮುಂಚೆ ಅವು ಪರಿಸರದ ಹಿನ್ನೆಲೆಗೆ ಹೊಂದಿಕೊಂಡು ಕೀಟಾಹಾರಿ ಪಕ್ಷಿಗಳ ಕಣ್ಣಿಗೆ ಬೀಳದೆ ಆಯ್ಕೆಯ ಅನುಕೂಲತೆಗಳನ್ನು ಗಳಿಸಿದ್ದುವು. ಈ ಗುಂಪಿನಲ್ಲಿ ಯಾವುದಾದರೊಂದು ಪತಂಗ ವಿಕೃತಿಯ ಫಲವಾಗಿ ಕರಿಬಣ್ಣದ ಪತಂಗವಾಗಿದ್ದರೆ ಅದು ಎಷ್ಟೇ ಬಲಶಾಲಿಯಾಗಿದ್ದರೂ ಪಕ್ಷಿಗಳ ಕಣ್ಣಿಗೆ ಬಿದ್ದು ನಾಶವಾಗುತ್ತಿತ್ತು. ಆದರೆ ಕಾರ್ಖಾನೆಗಳು ಸ್ಥಾಪನೆಗೊಂಡಮೇಲೆ ಅವುಗಳ ಚಿಮಣಿಗಳ ಬಂದ ಹೊಗೆಮಸಿ ಮರಗಳ ಕಾಂಡದ ಮೇಲೆ ಗೋಡೆಗಳ ಮೇಲೆ ಕೂತು ಪರಿಸರದ ಹಿನ್ನೆಲೆ ಕಪ್ಪು ಬಣ್ಣಕ್ಕೆ ತಿರುಗಿತು. ಈಗ ಬಿಳಿಪತಂಗಗಳ ಗುಂಪಿನಲ್ಲಿ ಕರಿಪತಂಗವೊಂದು ವಿಕೃತಿಯ ಮೂಲಕ ಹುಟ್ಟಿಕೊಂಡು ಕರಿ ಹಿನ್ನೆಲೆಯಲ್ಲಿ ಚೆನ್ನಾಗಿ ಹೊಂದಿಕೊಳ್ಳುವಂತಾಯಿತು. ಆದರೆ ಮೂಲ ಬಿಳಿಬಣ್ಣದ ಪತಂಗಗಳು ಮಾತ್ರ ಎದ್ದು ಕಾಣುವಂತಾಗಿ ನಾಶವಾಗತೊಡಗಿದವು. ಹೊಸದಾಗಿ ಕಾಣಿಸಿಕೊಂಡ ಕರಿಪತಂಗ ಸಂತಾನೋತ್ಪತ್ತಿ ಮಾಡತೊಡಗಿದ್ದರಿಂದ ಇದರ ಸಂಖ್ಯೆ ಅಧಿಕಗೊಂಡಿತು. ಈ ಸಂಗತಿ ಔದ್ಯೋಗಿಕ ಅತಿಕೃಷ್ಣತೆಗೆ (ಇಂಡಸ್ಟ್ರಿಯಲ್ ಮೆಲನಿಸಮ್) ಒಂದು ಉದಾಹರಣೆಯಾಗಿದೆ.

	ವಿಕೃತಿಗಳು ಸಾಮಾನ್ಯವಾಗಿ ಹಾನಿಕಾರಕವಾದವು. ಅಂಥ ಸಂದರ್ಭಗಳಲ್ಲಿ ವಿಕೃತ ಜೀನ್ ಜೀವಿಯ ಬೆಳೆವಣಿಗೆಯ ಹಂತದಲ್ಲಿಯೇ ಮಾರಕವಾಗಿ ತನ್ನನ್ನು ಹೊತ್ತ ಜೀವಿಯನ್ನೇ ಆಹುತಿ ತೆಗೆದುಕೊಳ್ಳುತ್ತದೆ. ತನ್ಮೂಲಕ ತಾನೂ ಕಣ್ಮರೆಯಾಗುತ್ತದೆ. ಈ ಬಗೆಯ ಆತ್ಮಹತ್ಯೆಯಿಂದ ಪ್ರಕೃತಿಯಲ್ಲಿರುವ ಜೀನ್‍ಗಳ ಸಮತೋಲನದಲ್ಲಿ ಏರುಪೇರಾಗುತ್ತದೆ. ಉಪಕಾರಿ ವಿಕೃತಿಗಳು ಪ್ರಭೇದಗಳಲ್ಲಿ ಆಗಾಗ್ಗೆ ತಲೆದೋರುವುದುಂಟು. ಇಂಥ ವಿಕೃತಿಗಳಿಗೆ ಅವಕಾಶ ಸಿಕ್ಕಿದರೆ ಪ್ರಕೃತಿ ಕೈವಾಡದಿಂದ ಅವು ಜೀವಿಸಂದಣಿಯಲ್ಲಿ ಸ್ಥಿರಗೊಳ್ಳುತ್ತವೆ. ಸಂತಾನೋತ್ಪತ್ತಿಯ ಮೂಲಕ ಅವುಗಳ ಸಂಖ್ಯೆಯು ವೃದ್ಧಿಯಾಗುತ್ತದೆ. ಇಂಥ ಹಲವು ಬಗೆಯ ಹಿತಕಾರಿ ವಿಕೃತಿಗಳು ದೀರ್ಘಕಾಲ ಸಂಗ್ರಹವಾದರೆ ಹೊಸ ಜೀವಿಪ್ರಭೇದಗಳಿಗೆ ನಾಂದಿಯಾಗುತ್ತದೆ.

	5. ಪ್ರಕೃತಿ ಕೈವಾಡ ಮೂಲತಃ ಕ್ರಿಯಾತ್ಮಕ ಶಕ್ತಿ ಎಂಬುದೇ ನವಡಾರ್ವಿನ್ ಸಿದ್ಧಾಂತಿಗಳ ವಾದ. ಏಕೆಂದರೆ ಅದು ಸಂತಾನೋತ್ಪತ್ತಿಯ ಮೂಲಕ ಆನುವಂಶಿಕ ವಿಕೃತಿಗಳನ್ನು ಜೀವಿ ಸಂದಣಿಗಳಲ್ಲಿ ಅಧಿಕಗೊಳಿಸುತ್ತದೆ ಹಾಗೂ ಪ್ರಸರಿಸುತ್ತದೆ. ಇಲ್ಲಿ ಜೀವಿಗಳು ಹೋರಾಡುವ ಗೋಜಿಗೇ ಹೋಗುವುದಿಲ್ಲ. ಸಮಬಾಳ್ವೆಯೇ ಪ್ರಧಾನ. ಯೋಗ್ಯವಾದುದು ಅಥವಾ ಯೋಗ್ಯವಲ್ಲದ್ದು ಎಂಬ ಪ್ರಶ್ನೆಗಳು ಇಲ್ಲಿ ಏಳುವುದೇ ಇಲ್ಲ. ಜೀವಿಸಂದಣಿಯಲ್ಲಿ ಯೋಗ್ಯವಾದುದು ಬಲಿಷ್ಠವಾಗಿರಬಹುದು. ಆದರೆ ಅದು ಸಂತಾನೋತ್ಪತ್ತಿ ಮಾಡುವ ಸಾಮಥ್ರ್ಯವನ್ನು ಕಳೆದುಕೊಂಡರೆ ಅಥವಾ ಬಂಜೆಯಾಗಿದ್ದರೆ, ಅದು ತನ್ನ ಯೋಗ್ಯ ಅಥವಾ ಉಪಯುಕ್ತ ಜೀನ್‍ಗಳನ್ನು ಮುಂದಿನ ಪೀಳಿಗೆಗಳಿಗೆ ಸಾಗಿಸಲು ಅಸಮರ್ಥವಾಗಿದ್ದರೂ ಅದಕ್ಕೆ ಆನುವಂಶಿಕವಾಗಿ ಸತ್ತಂತೆಯೇ. ಯೋಗ್ಯಜೀವಿ ದುರ್ಬಲವಾಗಿದ್ದರೂ ಅದಕ್ಕೆ ಸಂತಾನೋತ್ಪತ್ತಿ ಮಾಡುವ ಸಾಮಥ್ರ್ಯವಿದ್ದರೆ ಅದು ಜೀವಿವಿಕಾಸದಲ್ಲಿ ಜಯ ಗಳಿಸಿದಂತೆ.

	6. ಪ್ರತ್ಯೇಕತಾ ಕ್ರಿಯಾವಿನ್ಯಾಸ (ಐಸೊಲೇಟಿಂಗ್ ಮೆಕ್ಯಾನಿಸಮ್): ನಿಸರ್ಗದಲ್ಲಿ ಹೊಸ ಪ್ರಭೇದ ಕಾಣಿಸಿಕೊಳ್ಳಬೇಕಾದರೆ ಉಪ ಪ್ರಭೇದ ರೂಪುಗೊಳ್ಳಬೇಕು. ಹಲವು ಉಪಯುಕ್ತ ಜೀನ್‍ಗಳು ಒಂದು ಜೀವಿಸಂದಣಿಯಲ್ಲಿ ಸ್ಥಿರಗೊಂಡ ಮಾತ್ರಕ್ಕೆ ಇಡೀ ಪ್ರಭೇದವನ್ನೇ ಬದಲಾಯಿಸಿದಂತಾಗುವುದಿಲ್ಲ. ಒಂದು ಜೀವಿಸಂದಣಿಯಲ್ಲಿ ಹೊಸದಾಗಿ ರೂಪುಗೊಂಡ ಉಪಪ್ರಭೇದವು ಮೂಲಪ್ರಭೇದದೊಂದಿಗೆ ಬೆರೆತು ಸಂತಾನೋತ್ಪತ್ತಿ ಮಾಡಲು ಅಸಮರ್ಥವಾದರೆ, ಅಂದರೆ ಆನುವಂಶಿಕ ಪ್ರತ್ಯೇಕತೆಯನ್ನು ಗಳಿಸಿದರೆ ಆಗ ಮಾತ್ರ ಅದು ಹೊಸಪ್ರಭೇದವಾಗಿ ರೂಪುಗೊಳ್ಳುತ್ತದೆ. ವಿಭೇದಾತ್ಮಕ ಪ್ರಭೇದಗಳನ್ನು ಪ್ರತ್ಯೇಕಿಸುವ ತಡೆಗಳು ಹಲವು ಬಗೆಯವು. ಇವನ್ನು ಹೊರಗಿನವು ಮತ್ತು ಒಳಗಿನವು ಎಂದು ಎರಡು ಗುಂಪುಗಳಾಗಿ ವಿಂಗಡಿಸಬಹುದು. ಹೊರ ತಡೆಗಳಲ್ಲಿ ಭೌಗೋಳಿಕ ಮತ್ತು ಅನುವಂಶಿಕ ತಡೆಗಳೆಂಬ ಎರಡು ಗುಂಪುಗಳಿವೆ. ಆನುವಂಶಿಕ ತಡೆಗಳನ್ನು ಪರಿಸರದ ರೂಪುರಚನಾತ್ಮಕ, ಋತುಮಾನಿಕ, ನೀತಿಶಾಸ್ತ್ರೀಯ ಮತ್ತು ಮನೋವೈe್ಞÁನಿಕ ತಡೆಗಳೆಂದು ವಿಂಗಡಿಸಬಹುದು. ಆನುವಂಶಿಕ ತಡೆಗಳು ಜೀವಕೋಶೀಯವಾಗಿರಬಹುದು ಅಥವಾ ಸಂಕರ ತಡೆಗಳಾಗಿರಬಹುದು.		   (ಬಿ.ಎನ್.ಬಿ.; ಜೆ.ಆರ್.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ